ಈ ಕೆಳಕಂಡ ಕಥೆಯಲ್ಲಿ ಬರುವ ಎಲ್ಲಾ ಸನ್ನಿವೇಶಗಳೂ ಹಾಗೂ ಪಾತ್ರಗಳೂ ಯಾವುದಾದರೂ ಒಬ್ಬ ವ್ಯಕ್ಥಿಗೆ ಖಂಡಿತವಾಗಿಯೂ ಸಂಬಂಧಿಸಿರುತ್ತದೆ.
ಈ ‘ಸತ್ಯ’ ಘಟನೆಯನ್ನು ನನಗೆ ತಿಳಿಸಿದ ನನ್ನ ಅಜ್ಜಯ್ಯನಿಗೆ ಧನ್ಯವಾದಗಳು.
‘ನಿದ್ದೆವೀರ’ ವೇದೇಗೌಡರಿಗೂ ಸತ್ಯಕ್ಕಳಿಗೂ ಏನು ಸಂಬಂಧ?. ಚಿನ್ನ ಮಾಡಿಕೊಡಲು ಗೌಡರೇನು ಆಚಾರಿಯೇ?, ಅಥವಾ ಹುಡುಕಿಕೊಡಲು ಅವರೇನು ಪೊಲೀಸೇ?, ಎಂದು ತಲೆಯಲ್ಲಿ ಹುಳ ಬಿಟ್ಟುಕೊಳ್ಳಬೇಡಿ. ಅಸಲಿಗೆ ಗೌಡರಿಗೆ ಸತ್ಯಕ್ಕ ಯಾರು ಎಂಬುದೇ ತಿಳಿದಿಲ್ಲ!!!. ಅರ್ಥವಾಗಲಿಲ್ಲವೇ? ತಲೆ ಕೆಟ್ಟು ಕೆರ ಹಿಡಿಯುತ್ತಿದೆಯೇ?. ಚಿಂತಿಸಬೇಡಿ. ಕಥೆಯನ್ನು ಗಮನವಿಟ್ಟು ಓದಿ.
ಒಮ್ಮೆ ನಮ್ಮ ಸತ್ಯಕ್ಕ ಬೀರುವಿನಲ್ಲಿದ್ದ ಅರ್ಧ ಆಭರಣಗಳನ್ನು ಹಾಕಿಕೊಂಡು, ಇನ್ನರ್ಧ ಅಲ್ಲಿಯೇ ಬಿಟ್ಟು ಮದುವೆಗೆ ಹೋಗಿದ್ದರು. ಬಂದು ನೋಡಿದಾಗ ಮನೆಯೆಲ್ಲಾ ಗುಡಿಸಿ ಗುಂಡಾಂತರವಾಗಿತ್ತು. ಮನೆಯಲ್ಲಿದ್ದ ಹಣ ಒಡವೆಗಳೆಲ್ಲಾ ಕಾಣೆಯಾಗಿದ್ದವು. ಗಂಡನಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಒಡವೆಗಳು ಕಾಣೆಯಾಗಿದ್ದಕ್ಕೆ ಬಹಳ ದುಃಖಿತರಾದ ಸತ್ಯಕ್ಕ ಪೊಲೀಸ್ ಕಂಪ್ಲೇಂಟ್ ನೀಡಿದರು. ನಮ್ಮ ಪೋಲಿಸರು ಕಳ್ಳರನ್ನು ಹಿಡಿಯುವುದರಲ್ಲಿ ‘ಎತ್ತಿದ ಕೈ’ ಆಗಿರುವುದರಿಂದ ಕಳ್ಳತನವಾಗಿ ನಾಲ್ಕೈದು ತಿಂಗಳಾದರೂ ಕಳ್ಳ ಸಿಕ್ಕಿರಲಿಲ್ಲ. ಸತ್ಯಕ್ಕ ಒಡವೆ ಪಡೆಯುವ ಆಸೆಯನ್ನೇ ಕೈ ಬಿಟ್ಟಿದ್ದರು.
ಈಗ ‘ಎದ್ದೆ - ಮುದ್ದೆ - ನಿದ್ದೆ’ ಖ್ಯಾತಿಯ ವೇದೇಗೌಡರ ವಿಷಯಕ್ಕೆ ಬರೋಣ. ಇವರು ಪ್ರಧಾನಿಯಾಗಿದ್ದಂತ ಸಂದರ್ಭದಲ್ಲಿ ತಮ್ಮ ವಾಸಸ್ಥಾನವಾದ ದಕ್ಷಿಣ ಇಯಾಂಡಿಗೆ ಬರುವಾಗ ವಿಮಾನ ನಿಲ್ದಾಣದಿಂದ ತಮ್ಮ ಮನೆಯವರೆಗೂ ತಮ್ಮ ಭದ್ರತೆಗಾಗಿ ನೂರು ಮೀಟರ್‌ಗೆ ಒಬ್ಬರಂತೆ ಪೋಲೀಸರನ್ನು ನಿಯೋಜಿಸಿರುತ್ತಿದ್ದರು. ಆ ಪೋಲೀಸರದಂತೋ ನಾಯಿ ಪಾಡು. ಊಟ ತಿಂಡಿಬಿಟ್ಟು ಗೌಡರ ಸವಾರಿ ಬರುವುದನ್ನೇ ಕಾಯಬೇಕಾಗುತ್ತಿತ್ತು. ‘ಲೇಟ್ ಲತೀಫ್’ ಗೌಡರು ಬರುವಷ್ಟರಲ್ಲಿ ಪೋಲೀಸರು ಗಾಳಿ ಬಿಟ್ಟ ಬಲೂನಿನಂತಾಗಿರುತ್ತಿದ್ದರು. ಆದರೂ ಕೋಲ್ಗೇಟ್ ಜಾಹೀರಾತಿನಂತೆ ಹಲ್ಲು ಗಿಂಜಿಕೊಂಡು ನಿಲ್ಲಬೇಕಾಗುತ್ತಿತ್ತು. ಹೀಗೆ ಒಂದು ದಿನ ಗೌಡರು ಬರುತ್ತಾರೆಂದು ಎಲ್ಲಾ ಪೋಲೀಸರು ತಮ್ಮ ಗ್ರಹಚಾರವನ್ನು ಹಳಿಯುತ್ತಾ ಭದ್ರತಾ ಕಾರ್ಯಕ್ಕೆ ನಡೆದರು. ನಮ್ಮ ಸತ್ಯಕ್ಕನವರ ಬಡಾವಣೆಯ ಪೋಲೀಸ್ ಠಾಣೆಯಲ್ಲೂ ಒಬ್ಬ ಪೇದೆಯನ್ನು ಬಿಟ್ಟು ಇನ್ನೆಲ್ಲರಿಗೂ ಡ್ಯೂಟಿ ಬಿದ್ದಿತ್ತು. ಡ್ಯೂಟಿ ತಪ್ಪಿಸಿಕೊಂಡ ಪೇದೆ ಬಹಳಾ ಸಂತೋಷದಿಂದ ಒಂದು ದಮ್ ಎಳೆಯಲು ಹತ್ತಿರದ ಬೀಡಿ ಅಂಗಡಿಗೆ ಹೊರಟನು. ಆಗ ಅಲ್ಲೇ ಒಬ್ಬ ಯುವಕ ಬೈಕ್ ಕದಿಯುವ ಪ್ರಯತ್ನದಲ್ಲಿದ್ದುದನ್ನು ಕಂಡು ಅವನನ್ನು ಹಿಡಿದು ಸಾಹೇಬ್ರು ಬರುವವರೆಗೂ ಕುಳಿತಿರು ಎಂದು ಠಾಣೆಯಲ್ಲೇ ಅವನನ್ನು ಕೂರಿಸಿಕೊಂಡಿದ್ದನು. ಅವನು ಮತ್ಯಾರೂ ಅಲ್ಲ. ನಮ್ಮ ಸತ್ಯಕ್ಕನ ಆಭರಣ ಕದ್ದ ಕಳ್ಳ. ಇದು ಪೇದೆಗೆ ತಿಳಿದಿರಲಿಲ್ಲ.
ಇತ್ತ ಆರು ಗಂಟೆಗೆ ಬರಬೇಕಾದ ಗೌಡರು ಹತ್ತು ಗಂಟೆಯಾದರೂ ಬಂದಿರಲಿಲ್ಲ. ಕಾದು ಕಾದು ಬಸವಳಿದಿದ್ದ ಪೋಲೀಸರು ‘ಹ್ಯಾಪುಮೋರೆ’ ಹಾಕಿಕೊಂಡು ‘ಹರಳೆಣ್ಣೆ’ ಮುಖದ ಗೌಡರನ್ನು ಮನದಲ್ಲೇ ಶಪಿಸುತ್ತಿದ್ದರು. ಮೇಲಧಿಕಾರಿಗಳು ಗೌಡರ ಮೇಲಿನ ಕೋಪವನ್ನು ಕೆಳಗಿನವರ ಮೇಲೆ ತೀರಿಸಿಕೊಳ್ಳುತ್ತಿದ್ದರು. ಆದರೆ ಪಾಪ ಕೆಳಗಿನವರು ಯಾರಿಗೂ ಬಯ್ಯಲಾರದೆ ಒಳಗೊಳಗೇ ಉರಿದುಕೊಳ್ಳುತ್ತಿದ್ದರು. ಇತ್ತ ಗೌಡರು ಆಗಮಿಸಿ ತಮ್ಮ ಮನೆಗೆ ತೆರಳಿದ ನಂತರ ಎಲ್ಲರಂತೆ ಸತ್ಯಕ್ಕನ ಬಡಾವಣೆಯ ಸಬ್ ಇನ್‌ಸ್ಪೆಕ್ಟರ್ ಕೂಡಾ ಮನದೊಳಗೇ ಕುದಿಯುತ್ತಾ ಠಾಣೆಗೆ ಆಗಮಿಸಿದನು. ಆಗ ಪೇದೆಯು ಆ ಯುವಕನನ್ನು ತೋರಿಸಿ ನಡೆದ ಘಟನೆಯನ್ನು ವಿವರಿಸಿದನು. ಇನ್‍ಸ್ಪೆಕ್ಟರ್‌ಗೂ ಅವನ್ಯಾರೆಂದು ತಿಳಿದಿರಲಿಲ್ಲ. ಆದರೆ ತಮ್ಮ ಕೋಪ ತಣಿಸಿಕೊಳ್ಳಲು ಅವಕಾಶ ಸಿಕ್ಕಿದ್ದನ್ನು ಕಂಡು ಅವರಿಗೆ ಹಾಲು ಕುಡಿದಷ್ಟು ಸಂತಸವಾಯಿತು. ತಕ್ಷಣ ಗೌಡರನ್ನೂ, ಡ್ಯೂಟಿಗೆ ಹಾಕಿದ ಕಮಿಷರ್‌ನನ್ನೂ ಮನದಲ್ಲೇ ತೆಗಳುತ್ತಾ ಅವನನ್ನು ದನ ಬಡಿಯುವಂತೆ ಬಡಿಯತೊಡಗಿದನು. ಇದನ್ನು ನೋಡಿ ಪೇದೆಗೆ ಆಶ್ಚರ್ಯವೋ ಆಶ್ಚರ್ಯ. ಏಕೆಂದರೆ ಆ ಯುವಕ ಬೈಕ್ ಕದ್ದಿರಲಿಲ್ಲ. ಕದಿಯಲು ಪ್ರಯತ್ನಿಸುತ್ತಿದ್ದನಷ್ಟೆ. ಹಾಗೂ ಇಂತಹಾ ಮೈನರ್ ಕೇಸುಗಳು ಬಂದಾಗ ಒಂದೆರೆಡು ಬಿಗಿದು ಲಂಚ ವಸೂಲಿ ಮಾಡಿ ಕಳಿಸುವುದು ಇನ್‌ಸ್ಪೆಕ್ಟರ್‌ನ ನಿತ್ಯದ ಹವ್ಯಾಸವಾಗಿತ್ತು. ಅದರಲ್ಲಿ ತನಗೂ ಪಾಲು ಕೊಡುತ್ತಿದ್ದಿದುರಿಂದ ಇವನನ್ನು ಪೇದೆ ಹಿಡಿದು ತಂದಿದ್ದನು. ಇತ್ತ ಸ್ವಲ್ಪ ಕೈ ಬಿಸಿ ಮಾಡಿ ಹೋಗಬಹುದೆಂದು ಯೋಚಿಸಿದ್ದ ಕಳ್ಳನು ತನ್ನನ್ನು ಹೀಗೆ ಚಚ್ಚುತ್ತಾರೆಂದು ಎಣಿಸಿರಲಿಲ್ಲ. ತನ್ನ ದರೋಡೆಯ ವಿಷಯ ತಿಳಿದು ತದುಕುತ್ತಿದ್ದಾರೆ ಎಂದುಕೊಂಡು “ಎಲ್ಲವನ್ನೂ ಹೇಳಿಬಿಡುತ್ತೇನೆ ಹೊಡೆಯಬೇಡಿ” ಎಂದು ಗೋಗರೆದನು. ಆಗ ಇನ್‌ಸ್ಪೆಕ್ಟರ್ ಕಿವಿ ಚುರುಕಾಯಿತು. ಇದ್ಯಾವುದೋ ದೊಡ್ಡ ಕೇಸು, ಇದನ್ನು ಹಿಡಿದರೆ ಪ್ರಮೋಷನ್ ಗ್ಯಾರಂಟಿ ಎಂದು ಇನ್ನೂ ಜೋರಾಗಿ ತದಕಲು ಶುರು ಮಾಡಿದನು. ಆಗ ಕಳ್ಳ ಎಲ್ಲವನ್ನೂ ಬಾಯಿ ಬಿಟ್ಟನು. ಆತನು ಹೀಗೆ ಹತ್ತಾರು ಮನೆಗಳಲ್ಲಿ ದರೋಡೆ ಮಾಡಿದ್ದ ವಿಷಯ ಹೊರಗೆ ಬಂತು. ಅವನ ಮನೆಯಲ್ಲಿ ಹುಡುಕಿದಾಗ ಅವನು ಕದ್ದ ಎಲ್ಲಾ ಒಡವಗೆಳೂ ಸಿಕ್ಕಿದವು. ಹೀಗೆ ತಮ್ಮ ಅರಿವಿಲ್ಲದೇ ಗೌಡರು ಸತ್ಯಕ್ಕನ ಒಡವೆ ಸಿಗುವಲ್ಲಿ ಸಹಕರಿಸಿದ್ದರು.
ಕೊನೆಹನಿ : ಗೌಡರು ತಮ್ಮ ಜೀವನದಲ್ಲಿ ಮಾಡಿದ ‘ಒಳ್ಳೆಯ’ ಕೆಲಸ ಇದೊಂದೇ. ಇದನ್ನು ತಮ್ಮ ಅರಿವಿಲ್ಲದೇ ಮಾಡಿದ್ದರಿಂದ ಇದನ್ನು ಅವರ ಪುಣ್ಯದ ಲೆಕ್ಕಕ್ಕೆ ಸೇರಿಸಬಹುದೇ ಬೇಡವೇ ಎಂದು ‘ಯಮ’ ಹಾಗೂ ‘ಚಿತ್ರಗುಪ್ತ’ರಲ್ಲಿ ಜಗಳವಾಗುತ್ತಿದೆ ಎಂಬ ಮಾಹಿತಿ ಇದೆ. ಈ ವಿವಾದ ಅವರು ಅಲ್ಲಿಗೆ ಹೋಗುವುದರ ಮುನ್ನವೇ ಪೂರ್ಣಗೊಳ್ಳಲಿ ಎಂದು ಆಶಿಸೋಣ.