Saturday, August 15, 2009

ಕನ್ನಡದ ಕೊಲೆ

ಸೂಚನೆ : ಕನ್ನಡದ ಪರ ‘ಓರಾಟ’ ಮಾಡುವವರು ಈ ಹರಟೆಯನ್ನು ಓದಿ ‘ಹೋರಾಟ’ ಮಾಡಲು ಶುರು ಮಾಡಿದರೆ ಅದಕ್ಕೆ ನಾವೇ ಜವಾಬ್ದಾರರು.

ಕೊಲೆ ಎಂದ ತಕ್ಷಣ ಗಾಬರಿಯಾದಿರಾ? ವಾಟಾಳ್‍ಗೋ, ನಾರಾಯಣಗೌಡರಿಗೋ, ಪ್ರವೀಣ್ ಶೆಟ್ಟಿಗೋ ಕರೆ ಮಾಡಲು ಹೊರಟಿದ್ದೀರಾ? ಈ ಕೊಲೆಯನ್ನು ನಿಲ್ಲಿಸಲು ಅವರಿಂದ ಸಾಧ್ಯವಿಲ್ಲ. ವಿಪರ್ಯಾಸವೆಂದರೆ ಕೆಲವು ‘ಸೋ ಕಾಲ್ಡ್’ ಕನ್ನಡದ ರಕ್ಷಕರಿಂದಲೇ ಈ ಕೊಲೆ ನಡೆಯುತ್ತಿದೆ. ಮೇಲೆ ಹೆಸರಿಸಲ್ಪಟ್ಟವರಲ್ಲಿ ಒಬ್ಬರಿಂದ ಈ ಕೊಲೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.

‘ಈ ಕನ್ನಡದ ಕೊಲೆ ಕೇವಲ ಮಾತನಾಡುವಾಗ ಅಷ್ಟೇ ಅಲ್ಲ, ಬರವಣಿಗೆಯಲ್ಲೂ ಕಂಡುಬರುತ್ತದೆ. ನಾನೊಮ್ಮೆ ರಸ್ತೆಯಲ್ಲಿ ನಡೆಯುತ್ತಿರುವಾಗ ಒಂದು ಗೋಡೆ ಬರಹವನ್ನು ನೋಡಿದೆ. ಅದರಲ್ಲಿ ಹೀಗೆ ಬರೆದಿತ್ತು. ಈ ‘ಜಗ’ದಲ್ಲಿ ಮಲ ಮೂತ್ರ ವಿಸರ್ಜಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು’. ಅಬ್ಬಾ!!! ಇದೇನಿದು? ಮಲ ಮೂತ್ರಗಳನ್ನು ಕಟ್ಟಿಕೊಂಡಿರುವುದು ಹೇಗೆ ಎಂದು ಚಿಂತಿಸುತ್ತಿರುವಿರಾ? ಇಷ್ಟೆಲ್ಲಾ ಅವಗಡಗಳಿಗೆ ಆ ಬರಹದಲ್ಲಿ ಕನ್ನಡದ ಕೊಲೆಯಾಗಿರುವುದೇ ಕಾರಣ. ಆ ವಾಕ್ಯದಲ್ಲಿ ‘ಜಗ’ದ ಬದಲು ‘ಜಾಗ’ ಎಂದು ಹಾಕಿ ನೋಡಿ. ಆಗ ವಾಕ್ಯ ಅರ್ಥವತ್ತಾಗಿರುತ್ತದೆ. ಕೇವಲ ಕಾಗುಣಿತ ವ್ಯತ್ಯಾಸದಿಂದ ಎಷ್ಟೆಲ್ಲಾ ಅಪಾರ್ಥ ಉಂಟಾಯಿತು ಅಲ್ಲವೇ? ಇಲ್ಲಿ ಯಾರೋ ಸಾಮಾನ್ಯ ವ್ಯಕ್ತಿಯಿಂದ ತಪ್ಪಾಗಿದೆ. ಆದರೆ ಕೆಲವು ಗಾಯಕರು ಎಲ್ಲವನ್ನೂ ತಿಳಿದಿದ್ದರೂ ಕನ್ನಡವನ್ನು ಕೊಲ್ಲುತ್ತಾರೆ. ಅದನ್ನು ಮಾತ್ರ ಸಹಿಸಲಸಾಧ್ಯ. ‘ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ, ನಿಗಮಗೋಚರ ಮುಕುಂದ’, ದಾಸರ ಈ ರಚನೆ ಬಹಳ ಜನಪ್ರಿಯವಾಗಿದೆ. ಈ ಹಾಡನ್ನು ಆಕಾಶವಾಣಿಯಲ್ಲಿ ಗಾಯಕಿಯೊಬ್ಬರು ಹೀಗೆ ಹಾಡುತ್ತಾರೆ. ‘ನೀನೆ ದಯಾಳು ‘ನೀರ್‌ಮಲ’ ಚಿತ್ತ ಗೋವಿಂದ, ನಿಗಮಗೋಚರ ಮುಕುಂದ’. ಅಬ್ಬಾ ಎಂತಹ ಅಭಾಸ!! ರಾಗಕ್ಕೆ ತಕ್ಕನಾಗಿ ಹಾಡುವ ಭರದಲ್ಲಿ ಸಾಹಿತ್ಯಕ್ಕೆ ಇಷ್ಟೊಂದು ಅಪಚಾರ ಎಸಗುವುದೇ?. ಈ ಹಾಡನ್ನು ಕೇಳಿದರೇ ಭೇದಿ ಬಂದ ಅನುಭವವಾಗುತ್ತದೆ.

ಹೀಗೆ ಭಾಷೆಯ ದುರ್ಬಳಕೆಯ ಬಗ್ಗೆ ಮಾತನಾಡುವಾಗ ಒಂದು ಸ್ವಾರಸ್ಯಕರ ಘಟನೆ ನೆನಪಿಗೆ ಬರುತ್ತದೆ. ಒಮ್ಮೆ ವ್ಯಕ್ತಿಯೊಬ್ಬ ಉಪಹಾರ ಗೃಹಕ್ಕೆ ಹೋಗುತ್ತನೆ. ಅಲ್ಲಿ ಆತನಿಗೆ ‘ವರದರಾಜ ಬಾಣಾವಾರ’ ಎಂಬ ಬರಹ ಕಾಣುತ್ತದೆ. ಆಗ ಆತ ಆ ಉಪಹಾರ ಗೃಹದ ಮಾಲೀಕನನ್ನು ತಮ್ಮ ಹೆಸರು ವರದರಾಜ ಅಲ್ಲವೇ ಎಂದು ಪ್ರಶ್ನಿಸುತ್ತಾನೆ. ಆಗ ಮಾಲೀಕ ಇಲ್ಲವೆನ್ನುತ್ತಾನೆ. ಆಗ ಗಿರಾಕಿ ಹಾಗಾದರೆ ತಮ್ಮ ಊರು ಬಾಣಾವಾರವೇ? ಎಂದು ಕೇಳುತ್ತಾನೆ. ಆಗ ಮಾಲೀಕ ಮತ್ತೆ ಇಲ್ಲವೆನ್ನುತ್ತಾನೆ. ಗಿರಾಕಿಗೆ ಬಹಳ ಆಶ್ಚರ್ಯವಾಗುತ್ತದೆ. ಹಾಗಾದರೆ ಹೀಗೇಕೆ ಬರೆದಿದ್ದೀರಿ ಎಂದು ಆ ಬರಹವನ್ನು ತೋರಿಸುತ್ತಾನೆ. ಆಗ ಮಾಲೀಕ ರೇಗುತ್ತಾ, ಏನ್ರೀ, ನಿಮಗೆ ಅಷ್ಟೂ ಓದಲು ಬರುವುದಿಲ್ಲವೇ. ಅದು ‘ವಾರದ ರಜೆ ಭಾನುವಾರ’ ಎಂದು ಹೇಳುತ್ತಾನೆ. ಆಗ ಗಿರಾಕಿ ಹೀಗೆ ಹಿಗ್ಗಾಮುಗ್ಗಾ ಕನ್ನಡದ ಕೊಲೆಯಾಗುತ್ತಿರುವುದಕ್ಕೆ ಬೇಸರಿಸಿಕೊಂಡು ಅಲ್ಲಿಂದ ತೆರಳುತ್ತಾನೆ. ಹೀಗೆ ಕೆಲವರು ತಪ್ಪು ಬರೆಯುವುದಷ್ಟೇ ಅಲ್ಲದೆ ಅದನ್ನೇ ಸಮರ್ಥಿಸಿಕೊಳ್ಳುತ್ತಾರೆ. ಇನ್ನಾದರೂ ನಮ್ಮ ಕನ್ನಡಿಗರು ಎಚ್ಚೆತ್ತುಕೊಂಡು ತಮ್ಮನ್ನು ತಾವು ತಿದ್ದಿಕೊಳ್ಳಬೇಕು. ಹೀಗಾದರೆ ಮಾತ್ರ ಕನ್ನಡದ ಕೊಲೆ ನಿಲ್ಲುತ್ತದೆ ವಿನಃ ಯಾವುದೇ ಚಳುವಳಿ ಪ್ರತಿಭಟನೆಗಳಿಂದಲ್ಲ.

ಕೊನೆಹನಿ : ಕನ್ನಡದ ಕೊಲೆಯಾಗುವುದು ನಿಂತು ಎಲ್ಲರೂ ಕನ್ನಡವನ್ನು ಸರಿಯಾಗಿ ಮಾತನಾಡಲು, ಬರೆಯಲು ಕಲಿತರೆ ನಾವು ಹೆಮ್ಮೆಯಿಂದ ‘ಕನ್ನಡಾಂಬೆ ಗಲ್ಗೆ’.... ಕ್ಷಮಿಸಿ ಈ ಲೇಖನ ಬರೆಯುತ್ತಾ ನನಗೂ ಈ ರೋಗ ತಗುಲಿರಬೇಕು, ‘ಕನ್ನಡಾಂಬೆ ಗೆಲ್ಗೆ’ ಎನ್ನಬಹುದು ಅಲ್ಲವೇ?

1 comment:

  1. hmmm.. hige kannadada kole aagtaane ittu, aagtaane ide mundu aagta irutte. alva? good read!

    ReplyDelete