ನನ್ನ ಹರಟೆಯ ಕಥೆ(ಕೊರೆತ)ಗೆ ಸ್ವಾಗತ. ನಾನು ‘ಲೈಟ್’ ವೇಯ್ಟ್ ಆಗಿರುವುದರಿಂದ ‘ಲೈಟ್’ ಆಗಿಯೇ ಬರೆಯುತ್ತೇನೆ.ಈ ಬರಹಗಳು ಸ್ವಲ್ಪ ಹಾಸ್ಯ, ಕೀಟಲೆ, ಕಾಲೆಳೆಯುವಂತ ವಿಷಯಗಳನ್ನು ಹೊಂದಿರುತ್ತವೆ.‘ಲೈಟಾದ’ ಬರಹಗಳು ಎಂದರೆ ಹೆಚ್ಚಾಗಿ ಹಗುರವಾದ ಕೆಲವೊಮ್ಮೆ ವಿಶಿಷ್ಟ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು. ಬರೆಯಲು ನನಗೆ ಪ್ರೇರಕ ಶಕ್ತಿಯಾಗಿರುವವರು ನನ್ನ ಮಾನಸಿಕ ಗುರುಗಳಾದ ದುಂಡೀರಾಜ್, ಶ್ರೀವತ್ಸ ಜೋಷಿ ಮುಂತಾದವರು. ಆದ್ದರಿಂದ ಅಲ್ಪ ಸ್ವಲ್ಪ ‘ಪನ್’ ಕೂಡ ಕಾಣಿಸಿಕೊಳ್ಳಬಹುದು. ಪೀಠಿಕೆ ಇಷ್ಟು ಸಾಕು.
ಎಚ್ಚರಿಕೆ : ಹರಳೆಣ್ಣೆ ಮುಖದವರಿಗೆ ಅರ್ಥಾತ್ ನಗು ಬರದವರಿಗೆ ಈ ಹರಟೆಯಲ್ಲಿ ಪ್ರವೇಶವಿಲ್ಲ.
ಈ ಕೆಳಗಿನ ಕಥೆಯಲ್ಲಿ ಬರುವ ಎಲ್ಲಾ ಘಟನೆಗಳೂ ಕಾಲ್ಪನಿಕ. ಯಾವುದಾದರೂ ವ್ಯಕ್ತಿಗಳಿಗೆ ಸಂಭದಿಸಿದ್ದಲ್ಲಿ ಅದು ಕೇವಲ ಕಾಕತಾಳೀಯ.
ಇಯಾಂಡಿ ಎಂಬ ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಜನರು ಎಲ್ಲಾ ಸಣ್ಣ ಪುಟ್ಟ ಮರಿ ಪಕ್ಷಗಳಿಗೂ ಮತ ಹಾಕಿ ಗೆಲ್ಲಿಸಿದ್ದರು. ದೊಡ್ಡ ಪಕ್ಷಗಳಿಗೆ ಹೆಚ್ಚು ಸ್ಥಾನ ಬಂದಿದ್ದರೂ ಸರ್ಕಾರ ಮಾಡುವಷ್ಟಿರಲಿಲ್ಲ. ಈ ಮರಿ ಪಕ್ಷಗಳಿಗೆ ಸರ್ಕಾರ ರಚಿಸುವ ಅವಕಾಶ ಸಿಕ್ಕಿದ್ದು ಅದ್ಯಾವುದರ ಕೈಗೋ ‘ಮಾಣಿಕ್ಯ’ ಕೊಟ್ಟ ಹಾಗೆ ಆಗಿತ್ತು. ಈ ಪರಿಸ್ಥಿತಿಯಲ್ಲಿ ಎಲ್ಲಾ ಮರಿ ಪಕ್ಷಗಳೂ ಸೇರಿ ಒಂದು ‘ಮೀಟಿಂಗ್’ (ಈಟಿಂಗ್) ಕರೆದಿದ್ದವು. ಅಲ್ಲಿ ಎಂದರೆ ಸಭೆಯಲ್ಲಿ ನಮ್ಮ ಕಥಾನಾಯಕ ‘ವೇದೇಗೌಡರು’ ನಿದ್ರಾದೇವಿಗೆ ಶರಣಾಗಿದ್ದರು. ಉತ್ತರ ಭಾರತದ ಪ್ರಮುಖ ಮರಿ ಪಕ್ಷಗಳ ನಾಯಕರಾದ ‘ಆಲೂ’ ಹಾಗೂ ‘ಮುಲಾಮು’ ಯಾದವರು ಸಭೆಯಲ್ಲಿ ಕುರ್ಚಿಗಾಗಿ ಭಾರಿ ಹೋರಾಟ ನಡೆಸಿದ್ದರು. ಆದ್ದರಿಂದ ಪ್ರಧಾನ ಮಂತ್ರಿಯ ಆಯ್ಕೆ ಬಹಳ ಕಠಿಣವಾಗಿತ್ತು. ಆಗ ಹಠಾತ್ತನೆ ವೇದೇಗೌಡರಿಗೆ ಎಚ್ಚರವಾಯಿತು. ಅದಕ್ಕೆ ಕಾರಣ ಈ ಹಾಳಾದ ‘ಮೂತ್ರ’. ಮೂತ್ರ ವಿಸರ್ಜನೆಗಾಗಿ ಸಭೆಯಿಂದ ಹೊರನಡೆದರು ನಮ್ಮ ಗೌಡರು. ಆಗ ಎಲ್ಲರಿಗೂ ಇವರೊಬ್ಬರು ಸಭೆಯಲ್ಲಿದ್ದಾರೆ ಎಂಬುದು ಮನವರಿಕೆಯಾಯಿತು!!. ಆಗ ಯಾದವರು ಒಂದು ಒಪ್ಪಂದಕ್ಕೆ ಬಂದರು. ಈ ವೇದೇಗೌಡರನ್ನು ಪ್ರಧಾನ ಮಂತ್ರಿ ಮಾಡಿ ಮುಖ್ಯವಾದ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡು ಗೌಡರನ್ನು ‘ಕಂಟ್ರೋಲ್’ ಮಾಡುವುದೆಂದು ತೀರ್ಮಾನವಾಯಿತು. ಗೌಡರು ಪುನಃ ಸಭೆಗೆ ಬರುವಷ್ಟರಲ್ಲಿ ಸಭೆ ಮುಗಿದಿತ್ತು. ಸಭೆ ನಡೆದ ಉತ್ತರ ಇಯಾಂಡಿಯಿಂದ ತಮ್ಮ ವಾಸಸ್ಥಳವಾದ ದಕ್ಷಿಣ ಇಯಾಂಡಿಯವರೆಗೂ ವಿಮಾನದಲ್ಲಿ ತೂಕಡಿಸುತ್ತಲೇ ಬಂದರು ನಮ್ಮ ಶ್ರೀಮಾನ್ ಗೌಡರು. ಕೆಳಗಿಳಿದ ತಕ್ಷಣ ಪತ್ರಕರ್ತರು ಅಭಿನಂದಿಸಿದಾಗ ಗೌಡರು ಕಕ್ಕಾಬಿಕ್ಕಿ!!. ಆಗ ಆಪ್ತ ಕಾರ್ಯದರ್ಶಿ ನಡೆದ ವಿಷಯವನ್ನು ಗೌಡರ ಕಿವಿಯಲ್ಲಿ ಉಸುರಿದರು. ಆಗ ಗೌಡರು ನಾನು ಮುಖ್ಯಮಂತ್ರಿಯಾಗಿ ಮಾಡಿದ ‘ಸಾಧನೆ’ಯನ್ನು ಗಮನಿಸಿ ನನ್ನನ್ನು ಪ್ರಧಾನ ಮಂತ್ರಿ ಮಾಡಿದ್ದಾರೆ ಎಂದು ‘ಮುತ್ತಿನಂತಾ’ ಮಾತೊಂದನ್ನು ‘ಉದುರಿಸಿದರು’.
ಕೊನೆ ಹನಿ : ಈಗಿನ ಲೋಕಸಭೆಯಲ್ಲೂ ಆಲೂ ಯಾದವರು ದಕ್ಷಿಣ ಇಯಾಂಡಿಯವರೊಬ್ಬರನ್ನು ನಾನೇ ಪ್ರಧಾನ ಮಂತ್ರಿ ಮಾಡಿದ್ದು ಎಂದು ಹೇಳಿ ಗೌಡರನ್ನು ಉರಿಸಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿರುವ ‘ಸತ್ಯ’!! ಸಂಗತಿ.
ha..ha.. very nice and funny.really good at first attempt!keep writing!
ReplyDelete